Monday, 16 May 2022

ಕಥೆ-ಅಬ್ದುಲನ ಕೊರಳಲ್ಲಿ ಲಿಂಗ

 ಕತೆ


ಅಬ್ದುಲ್‌ ನ ಕೊರಳಲ್ಲಿ ಲಿಂಗ 


ಶಂಕರ ಬೈಚಬಾಳ


ಒಂದ್ಕಾಲಾ ಜರಾ ಕುಂಟದ್ಹಾಂಗ ಮಾಡಿ ಅಂತರಲೆ ಹಿಡದದ. ಮೂಗಿನ ಹೊಳ್ಳಿ ಎತ್ತೆತ್ತಿ ಹಾಕ್ತದ. ಒಂದಸಂನ ಹೊಟ್ಟಿ ದಾಪ ಬಡಕೊತೈತಿ, ನಾಲಿಗಿ ಮ್ಯಾಗ ಕೈ ಇಟ್ರ ಕೆಂಡಾ ಮುಟ್ಟದ್ಹಾಂಗ ಆಕೈತಿ, ನಿನ್ನೆ ದೀಪಾ ಹಚ್ಚು ಹೊತ್ತಿಗೆ ಒಂದೀಸ ನೀರ ಕುಡದಿದ್ದ ಬಿಟ್ರ ಇಲ್ಲಿತನಾ ಏನೂ ಮುಟ್ಟಿಲ್ಲ ನನಗರೆ ಗಾಬರಿ ಅನಿಸಿಬಿಟ್ಟದ ಎಂದು ಹೇಳಿದ ರೈತ.


ಹೆಂಡಿ ಉಚ್ಚಿ ಆಗೆದಾ? ಕೇಳಿದೆ


ನಿನ್ನೆ ಮೂರುಚಂಜಿ ವೆಳ್ಯಕ ಇಷ್ಟ ಒಂದೀಟ ಹೆಂಡಿ ಹಾಕ್ಯಾದ, ಅದನೂ ಕೀಂವ ಮಲುವಿನಾಂಗ ಇತ್ರಿ. ಹೆಂಡಿ ಹಾಕಾಗ ಎತ್ತಿನ ಮುಕುಳಿ ಮನಸೇರು ಹೂಂಸ ಬಿಟ್ಟಾಗ, ಸಪ್ಳ ಬರಾಂಗ ಪುಂಯಿಕ್ ಪುಂಯಿಕ್ ಅಂತ ಸಪ್ಳ ಆಕ್ಕದ. ಮತ್ತ ಉಚ್ಚಿರೆ ಹಳದಿ ಅರಸಿಣ ಬಣ್ಣದಾಂಗ ಹೊಯ್ತದ. ಎರಡೂ ಕಿಂವಿ ಬಡಕೋತದ, ಮೂಗರ ಒಣಗೇದ, ಬಾಲಾ ಜಾಡಸ್ತದ, ಕಣ್ಣ-ಗಿಣ್ಣ ಆರಾಮ ಅದಾವು. ಅದಕೇನು ಜಡ್ಡ ಇಲ್ಲ, ಬರೆ ಮೇವು ಬಿಟ್ಟದ. ನೀವು ದಿಗ್ರಿ ಹಚ್ಚಿ ಪರೀಕ್ಷೆ ಮಾಡಿ ಚೂಜಿ ಚುಚ್ಚಿ ಮೇವು ತಿನಾಂಗ ಮಾಡಿಬಿಡ್ರಿ ನಿಮಗ ಪುಣ್ಯೆ ಬರ್ತದ.  


ಇಲ್ಲೆ ಹೊಡ್ಡಾ ಇಳ್ಯಾನಾ ಬರ್ತದ, ಸಂಗೊಂಡನ್ವಾರಿ ದಾಟಾನಾ ಮಾಳಪ್ಪನ ಹಳ್ಳ, ಅಲ್ಲಿಂದ ಇಟ್ಟಗೇರತ್ವಾಟಾ, ಇಟ್ಟಗೇರ ತ್ವಾಟಾ ಆಗಾನಾ ಸಾಲಿ ಹೊಲ. ಸಾಲಿ ಹೊಲಕ್ಕ ನಮ್ಮೂರ ಹತ್ತೆದ್ರಿ ಎಂದು ರೈತ ತನ್ನ ಪೂವರ್ಾಪರವನ್ನೆಲ್ಲ ಹೇಳಿದ. 


'ನಿನ್ನ ಹೆಸರೇನಪಾ?' 


'ಶಿವಾನಂದ ಅಂತ್ರಿ' ಸಾಹೇಬ್ರಾ ನೀವೇನ ಕಾಳಜಿ ಮಾಡಬ್ಯಾಡ್ರಿ ನಂದು ಗ್ಯಾರೇಜ ಇದ್ದ ಗಟ್ಟಮೂಟ ಸೈಕಲ್ ಅದ. ಹೂವಿನ್ಹಾಂಗ ಕುಂದ್ರಸಗೊಂಡು ಹೂವಿನಾಂಗ ಒಯ್ಯತಿನಿ. ನಮ್ಮೂರ ಬಸ್ಸೊಂದು ಬಾಳ ಅಡಮೂಟ ಅದ ಬರ್ರಿ, ಇರುದೊಂದೆ ಬಸ್ಸ, ಸೂರ್ಯ ಹೊಂಡೊಟ್ಲೆ ಊರ ಬಿಟ್ಟ ಹೊಕ್ಕದ, ಮತ್ತ ಸೂರ್ಯ ಮುಣಗದಿಂದ ವಸ್ತಗಿ ಅಂತ ಬರ್ತದ. ಅದು ನಮ್ಮಂತವರಿಗೆ ಇದ್ದೂ ಇಲ್ದಾಂಗ ಆಗೇದ. ಹೊಡ್ಡಾ ಎರಾಗ ಒಂದೀಟ ಸೈಕಲ್ಕ ಡಬಲ್ ಸೀಟ್ ನಡ್ಯಾಂಗಿಲ್ಲ. ನಾಕ ಹೆಜ್ಜಿ ಇಳ್ದ ನಡದ್ರ ಪಾರ ನಮ್ಮೂರತನಾ ಇಳಕಲಿನ ಇಳಕಲಿ. ಬರ್ಹ್ ಅಂತ ಸೈಕಲ್ ಹೊಕ್ಕದ ಎಂದ.


ಅಲ್ಲಪಾ ನಮ್ಮಗಾಡಿಗಿ ಪೆಟ್ರೋಲ್ ಹಾಕ್ಸಿ ಬಿಡಲಾ ಇಬ್ಬರೂ ಹೋಗಿ ನೋಡಕೊಂಡು ಮತ್ತ ಸರಗ್ನೆ ಇಲ್ಲಿಗೆ ಬರಾಕ ಬರ್ತದ. ಸೈಕಲ್ ಮ್ಯಾಲ ಹೋದ್ರ ತಡಾ ಆಕ್ಕದ. ಇಲ್ಲಿ ದವಾಖಾನ್ಯಾಗ ಬ್ಯಾರೆ ಯಾರೂ ಇಲ್ಲ ಮತ್ತ ನಿಮ್ಮಂತ ರೈತರು ಯಾರರ ಬಂದ್ರ ಅವರ್ಗಿ ತೊಂದರಿ ಅಕ್ಕದ


'ಏಟ ತಗೊಂತಾರಿ ಎಣ್ಣಿಗಿ?'


'ಒಂದ ಮೂವತ್ತ ರೂಪಾಯಿ'


'ಆಯಿತನಡ್ರಿ ಡಾಕ್ಟರ್ಸಾಹೇಬ್ರ ಹತ್ತ ಸಾವಿರ ಕಿಮ್ಮತ್ತಿನ ಬಂಗಾರದಂತ ಎತ್ತದಮೂಕ ಜನಾವಾರಕ್ಕ ಉಪಚಾರ ಮಾಡಿದ್ರ ಏನ್ ಕೆಟ್ಟಲ್ಲ. ನನಗೂ ಜರಾ ಮೊನ್ನೆ ಸನಕಿ ಬಿದ್ದು ಕಾಲ ಬ್ಯಾನಿ ಆಗೇದ ನಿಮ್ಮ ಪಟ್ಪಟ್ಟಿ ತಗೊಂಡೆ ಹೋಗೂನು' ಎಂದ.


ಸೈಕಲ್ಮೋಟರ್ ಮೇಲೆ ಬಂದು ಊರನ್ನು ಸಮೀಪಿಸಿದಾಗ, ಒಂದೆರೆಡು ದೇವಾಲಯದ ಗೋಪುರಗಳು, ಮಸೀದೆ ಮೇಲಿನ ಲೌಡ್ಸ್ಪೀಕರ್, ನಾಲ್ಕಾರು ಎಂಟೇನಾ, ಕೆಲ ಗಿಡಗಳು, ದೂರದಿಂದಲೆ ನಮ್ಮನ್ನು ಸ್ವಾಗತಿಸಿದವು. ಇನ್ನೂ ಹತ್ತಿರ ಬಂದಂತೆ ಶಾಲೆ. ಅಳಿದುಳಿದ ಕೋಟೆ ಗೋಡೆ ಮಂಡವಾಗಿರುವ ಹುಡೇ ಆರ್ಸಿಸಿಯ ಅಂಬೇಡ್ಕರ ಭವನ. ಅದರ ಮುಂದೆ ಸೋಮಾರಿಗಳಾದ ಹತ್ತೆಂಟು ಜನ ಕುಳಿತು ಏನೋ ಆಡುತ್ತಿದ್ದಾರೆ. ಚೊಣ್ಣ ಇರದ ಹರಕು ಅಂಗಿ ಹಾಕಿಕೊಂಡು ಎಷ್ಟೋ ದಿನಗಳ ಹಿಂದೆ ಜಳಕ ಮಾಡಿರಬಹುದು ಎನಿಸುವ, ಕರಿಬಣ್ಣದ ಸುಂಬಳ ಮುಖದ ಹುಡುಗರು, ಹೊಲಸು ನಾರುವ ಗಟಾರದ ನೀರಿನಲ್ಲಿ ಧಂಟಿನಿಂದ ಗೀರು ಹಾಕುತ್ತಲಿದ್ದಾರೆ. ತಲೆಗೂದಲು ಕಟ್ಟಿಕೊಳ್ಳದೆ ಬಯಲನ್ನೇ ಮನೆ ಮಾಡಿ ತೊಡೆಮೇಲೆ ಕೂಸು ಹಾಕಿಕೊಂಡು ಮೂರು ಗುಂಡಿನ ಒಲೆಯ ಜಳಕ್ಕೆ ರೊಟ್ಟಿ ಬೇಯಿಸುವವಳೊಬ್ಬಳು. ಸಮಯ ಹತ್ತಾದರೂ ಕವದಿಯ ಚಿಂದಿಯಲ್ಲಿ ಹಳಸು ಮೋರೆಯೊಂದಿಗೆ ಮಲಗಿ ರೇಡಿಯೋ ಕೇಳುತ್ತಿರುವ ಅವಳ ಗಂಡ. ರಸ್ತೆಯ ಇನ್ನೊಂದು ಬದಿಗೆ ತಲೆಗೆ ಎಣ್ಣೆ ಇರದೆ ಹತ್ತಾರು ವರ್ಷಗಳಿಂದ ಜಿಡ್ಡುಗಟ್ಟಿದ ತಲೆಗೂದಲುಗಳುಳ್ಳ ಹರಿದ ಹಸಿರು ಸೀರೆಯ ಎರಡು ಮೂರು ಜನ ಜೋಗಮ್ಮಗಳು ಯಾವುದೋ ಜಗಳದಲ್ಲಿ ತೊಡಗಿದ್ದಾರೆ. ಅವರ ನಡುವೆ ಒಬ್ಬ ಮಧ್ಯವಯಸ್ಸಿನ ಮಹಿಳೆ ಸ್ವಲ್ಪ ಶೃಂಗರಿಸಿಕೊಂಡು ಯಾರಿಗಾಗಿಯೋ ಕಾಯುತ್ತಲಿದ್ದಾಳೆ. ಅಲ್ಲೆ ರಸ್ತೆ ಅಂಚಿಗೆ ಕೈಯಲ್ಲಿ ಕಟಿರೊಟ್ಟಿ ಹಿಡದ ಮಗುವೊಂದು ಅಂಗಿ ಎತ್ತಿ ಕಕ್ಕಸಕ್ಕೆ ಕುಳಿತು ಮೂಗಿನಿಂದ ಸೋರುವ ಸುಂಬಳವನ್ನು ಇನ್ನೊಂದು ಕೈಯಿಂದ ಒರೆಸಿಕೊಳ್ಳುತ್ತಲಿದೆ. ರಸ್ತೆಯನ್ನು ಅನುಸರಿಸಿ ನಮ್ಮ ಗಾಡಿ ಸ್ವಲ್ಪ ತಿರುಗಿದಾಗ, ಎರಡು ಮೂರು ಕುರಿ ಹಟ್ಟಿಗಳು, ಕುರಿ ಉಣ್ಣೆ ಕತ್ತರಿಸುವವ, ಕಂಬಳಿ ಅಂಚಿಗೆ ಗಂಟು ಹಾಕುವವ, ಕುರಿ ಹಿಕ್ಕಿ ಬಳಿದು ಚೆಲ್ಲುವವ, ಅರಿಶಿಣ ಪುಡಿಯನ್ನೇ ಹಣೆಗೆ ಬಳಿದುಕೊಂಡು, ಹಳದಿ ಪಟಗ ತಲೆಗೆ ಸುತ್ತಿಕೊಂಡ ಕೆಲವರು, ರಸ್ತೆಯ ಮಗ್ಗಲು ಇರುವ ಅರಳಿ ಕಟ್ಟೆಗೆ ಕುಳಿತು ಏನೋ ಹರಟುತ್ತಿದ್ದಾರೆ. ಕೆಲ ಮಹಿಳೆಯರು, ಪುರುಷರು ಬುತ್ತಿ, ಒಕ್ಕಲುತನದ ಸಾಮಾನು ಹೊತ್ತುಕೊಂಡು ಕುರಿ ದನಗಳೊಂದಿಗೆ ಅಡವಿಗೆ ಹೊರಟಿದ್ದಾರೆ. ಮನೆಯಲ್ಲಿ ಕಟ್ಟಿದ ಕೆಲ ಎತ್ತುಗಳ ಕೊರಳಲ್ಲಿಯ ಗಂಟೆಯ ಶಬ್ದವನ್ನು ಕೇಳುತ್ತ ಮುಂದೆ ಹೋದರೆ ಬಲರಸ್ತೆಯ ಬದಿಗೆ ಪುಟ್ಟಗುಡಿ, ಸಾಲುಗಟ್ಟಿನಿಂತ ಹತ್ತಾರು ಜನ ಪೂಜಾರಿಯಿಂದ ಏನೋ ಕೇಳಲು ಆತುರರಾದ ದೃಶ್ಯ. ರಸ್ತೆಯ ನೇರಕ್ಕೆ ನೋಡಿದರೆ ಊರ ಅಂಚಿನ ಹೊಲದ ಮೂಲೆಯಲ್ಲಿ ತೊಗರಿ ಕಟ್ಟಿಗೆಯ ಚಪ್ಪರದ ಸರಾಯಿ ಅಂಗಡಿ, ಅಲ್ಲಿರುವ ಒಬ್ಬಿಬ್ಬರು ಕುಡಿದು ಜೋತಾಡುತ್ತಲಿದ್ದಾರೆ. ಮಗ್ಗಲು ಹೊಲದಲ್ಲಿ ಸತ್ತ ದನ ಎಳೆದು ತಿನ್ನಲು ಜಗಳವಾಡುತ್ತಿರುವ ನಾಯಿಗಳು, ಕಾಗೆಗಳು. ಅದಕ್ಕೆ ಸ್ವಲ್ಪ ಹತ್ತಿರದಲ್ಲೆ ದನದ ಚರ್ಮ ಶುಚಿಗೊಳಿಸುತ್ತಿರುವ ಮುದುಕ, ಗ್ರಾಮದ ಹೊಲಸೆಲ್ಲ ಹರಿದು ಬರುತ್ತಿರುವ ಪುಟ್ಟ ಹಳ್ಳ, ಮತ್ತೊಂದು ಕಡೆ ಕಣ್ಣು ಹಾಯಿಸಿದಾಗ ಇದ್ದುದರಲ್ಲೆ ಸ್ವಲ್ಪ ಸುಧಾರಣೆ ಹೊಂದಿದ ಒಂದೆರಡು ಸಣ್ಣ, ಬಣ್ಣದ ಮನೆಗಳು. ಗಿಡದ ಕೆಳಗೆ ಚಪ್ಪಲ್ ಹೊಲಿಯುತ್ತಿರುವ ಗಡ್ಡದ ಮುದುಕ. ಸ್ವಲ್ಪ ರೇಸ್ ಕಡಿಮೆ ಮಾಡಿ ಹಾನರ್್ ಹಾಕುತ್ತ ಗಾಡಿ ತಿರುಗಿಸಿ ಸ್ವಲ್ಪೇ ದೂರ ಹೋದರೆ ದೊಡ್ಡ ಹುಣಸಿ ಗಿಡದ ಕೆಳಗೆ ಬಿದಿರಿನಿಂದ ಬುಟ್ಟಿ ಹೆಣೆಯುತ್ತಿರುವ ಬಡಕಲು ಶರೀರದ ಮುದುಕ, ಎದುರಿಗೆ ದೊಡ್ಡ ಬಾಗಿಲಿನ ಗೌರವದ ಸಂಕೇತಗಳುಳ್ಳ ದೊಡ್ಡದಾದ ಕಟ್ಟಡ, ಕಟ್ಟಡದ ಮಹಾದ್ವಾರದ ಮೇಲೆ ಮಹಾಮಾನವತಾವಾದಿ ಬಸವಣ್ಣನ ಮೂತರ್ಿ, ಅಲ್ಲೇ ಮಗ್ಗಲು ತೇರಿನ ಮನೆ, ಮುಂದೆ ವಿಶಾಲವಾದ ಅಂಗಳ, ಪುಟ್ಟ ಬಸ್ಟ್ಯಾಂಡ್. ಅಂಗಳದ ಸುತ್ತಲೂ ಸ್ವಲ್ಪ ಶ್ರೀಮಂತರವು  ಎನ್ನಬಹುದಾದ ಮಹಡಿಯ ಮನೆಗಳು. ಮನೆಯ ಮುಂದೆ ಕಿಮ್ಮತ್ತಿನ ಸುಂದರ ಕಿಲಾರಿ ಎತ್ತುಗಳು. ಊರಿಗೆ ಹೋಗಲು ತಯಾರಾಗಿ ಬಂದ ಕೆಲಜನ, ಶ್ರೀಮಂತರೆನ್ನಬಹುದಾದ ಢಾಳ ವಿಭೂತಿಯ ಕೆಲ ಊರ ಹಿರಿಯರು, ಚಹಾದಂಗಡಿಯಲ್ಲಿಯ ಭಕ್ತಿಗೀತೆಯ ಹಾಡುಗಳು, ಎರಡು ಕಿಲೋಮೀಟರ್ ಇಂಗ್ಲೀಷ ಯು ಆಕಾರದಲ್ಲಿ ಊರನ್ನು ಸುತ್ತಿದ ನನಗೆ ಇನ್ನೂ ಇವನ ಮನೆ ಬರದಾದಾಗ ಎಲ್ಲೆಪಾ ಶಿವಾನಂದ ನಿಮ್ಮ ಮನಿ? ಎಂದು ಕೇಳಿದೆ. 


'ಊರಾಗ ಅದರಿ ಸಾಯಿಬ್ರಾ, ಇನ್ನೊಂದು ತುಸು ಮುಂದ ನಡಿರಿ' ಎಂದ.


'ಅಲ್ಲ್ಲಪಾ ಇಟೋತನಾ ಬಂದಿದ್ದು ಇದೇನು ಊರಲ್ಲೇನು?' 


ಊರಹೌದ್ರಿ, ರಸ್ತಾನೆ ಹೀಗದ ಊರ ಸುತ್ತಾ ಹೊಡಕೊಂಡು ಸಾಲಿ, ಅಂಬೇಡ್ಕರ ಭವನದ ಹೊಲಗೇರಿ, ಭೀರಪ್ಪನಗುಡಿ ಕುರುಬರಗೇರಿ ಮಾದರಕೇರಿ ಕೊರವೇರೋಣಿ ದಾಟಿ ನಾವು ಈಗ ಮಠದ ಮುಂದ ಹೊಂಟೇವ್ರಿ. ಅಗಸಿದಾಟಿ ಗೌಡ್ರ ಓಣಿ ಅಚ್ಚಿಕ ತೇರಿನ ಕಟ್ಟಿ, ಅಲ್ಲಿಂದ ಮಡದಾರ ಓಣಿ ಆಗಾನಾ ನಮ್ಮ ಮುಸಲ್ರ್ ಮನಿಗೋಳು ಬರತಾವರಿ. 


ದೊಡ್ಡ ಕಮಾನುಳ್ಳ ಅಗಸಿ, ಅಕ್ಕಪಕ್ಕದಲ್ಲಿ ಹಳೆಯಕಾಲದ ಗೌಡ್ಕಿ ಮಾಡಿದ ಮನೆಗಳು, ಒಳಗೆ ಟಿ.ವಿ. ಟೇಪ್ ರೆಕಾರ್ಡರ್, ತೂಗುಮಂಚ ಕಾಳುತುಂಬಿದ ನೂರಾರು ಚೀಲಗಳು, ಬಾಗಿಲು ಕಿಡಕಿಗಳಿಂದ ಕಾಣುತ್ತಿವೆ. ಮನೆಯ ಮುಂದೆ ಎತ್ತಿನಗಾಡಿ ಒಕ್ಕಲುತನದ ಸಾಮಾನುಗಳು ಎದುರಿಗೆ ಹೊಸ ಮಾದರಿಯ ಗ್ರಾಮ ಪಂಚಾಯಿತಿ ಕಟ್ಟಡ, ಅಂಗಳದಲ್ಲಿ ಗಾಂಧಿ ಪ್ರತಿಮೆ. ಅಂಗಳದ ಒಂದು ಬದಿಗೆ ಶತಮಾನಗಳ ಇತಿಹಾಸ ಹೇಳುವ ಕಲ್ಲಿನ ಕಟ್ಟಡದ ದೊಡ್ಡ ಭಾವಿ. ಮಧ್ಯಮವರ್ಗ ಮೇಲ್ವರ್ಗದ ಜನರಿರುವ ಇಲ್ಲಿಯ ವಾತಾವರಣ ನೋಡುತ್ತಿರುವಂತೆಯೆ ನಾನು ಶಿವಾನಂದನನ್ನು ಕೇಳಿದೆ


'ನಿಮ್ಮೂರ ಗಡಚ್ ಅದ ಬಿಡಪಾ ಶಿವಾನಂದ' 


ಏನೋ! ಹಾಂಗೂ, ಹಿಂಗೂ ಅದಾ ಬಿಡ್ರಿ ಸಾಹೇಬ್ರಾ ಏನಿದ್ರು ಅನ್ನದ ಮುತ್ಯಾಂದ ಪುಣ್ಯೇರಿ ಈ ಊರಿಗಿ 


'ಅನ್ನದ ಮುತ್ಯಾ!!!' ಆಶ್ಚರ್ಯದಿಂದ ಕೇಳಿದೆ. ನಾನು ಇಲ್ಲಿಯವರೆಗೂ ಈ ಹೆಸರನ್ನೆ ಕೇಳಿರಲಿಲ್ಲ. 


'ಹೌದ್ರಿ ಅವ್ರ...ದ ಆಶೀವರ್ಾದ' ಎಂದ ಶಿವಾನಂದ.


ಕುತೂಹಲದಿಂದ 'ಅವರು ಏನಿದ್ರು?' ಎಂದು ಕೇಳಿದೆ.


'ಅವ್ರು ಭಾಳ್ ದೊಡ್ಡ ಮಾತ್ಮರು ಸಾಹೇಬ್ರ' 


'ಅದ್ಯಾಂಗ !?'


'ಇಂಗ್ರೇಜಿ ಸರಕಾರ ಅವ್ರಗಿ ಅನ್ನದ ಮುತ್ಯಾ ಅಂಥ ಇನಾಮ ಕೊಟ್ಟಿತ್ತು'


'ಇನ್ನೂ ಆತುರದಿಂದ, ಹಂಗಾರ...! ಅವರು ಈಗ ಎಲ್ಲಿ ಅದಾರ!?'


'ಅವರು ಲಿಂಗದಾಗಾಗ್ಯಾರಿ ಸಾಹೇಬ್ರ. ಗಾಡಿ ಇಲ್ಲೇ ತರಬ್ರಿ... ನಮ್ಮ ಮನಿ ಬಂತು. ಇಲ್ಲೆ ಒಳಗ ಬರ್ರಿ ಗ್ವಾದೆಲ್ಯಾಗ ಎತ್ತ್ತ ಅದ ಎಂದ. 


'ಅಂವಾ ಗಾಡಿ ಇಳಿದು ನನ್ನ ಕರೆಯುತ್ತ ಮುಂದೆ ಮುಂದೆ ಹೋದ ನಾ ಗಾಡಿ ಅಲ್ಲೆ ನಿಲ್ಲಿಸಿ ಅಂವನನ್ನು ಹಿಂಬಾಲಿಸಿದೆ. ನನ್ನ ಮನಸ್ಸು ಮಾತ್ರ.... 'ಯಾರು ಈ ಅನ್ನದ ಮುತ್ಯಾ! ರಾಜಕೀಯ ಮುಂದಾಳುವೆ? ಸ್ವಾತಂತ್ರ್ಯಯೋಧನೆ? ಜಗದ್ಗುರುವೆ? ಸಮಾಜ ಸುಧಾರಕನೆ? ಬೈರಾಗಿಯೆ? ಸಂತ- ಸತ್ಪುರುಷನೆ?' ಎಂದು ಏನೇನೊ ಕಲ್ಪಿಸಿಕೊಂಡಿತು.


ಗಂಡಗಚ್ಚಿಹಾಕಿ ಹೆಂಡಿಕಸಾ ಮಾಡುತ್ತಿರುವ ಗಟ್ಟಿಮುಟ್ಟಾದ ಶರೀರದ, ಗೇಣುದ್ದ ಬಿಳಿ ಕೂದಲಿನ ಗಡ್ಡಧಾರಿ, ಚಂಚಲವಿಲ್ಲದ ಆತ್ಮವಿಶ್ವಾಸದ ಮನಸ್ಸು, ಮಂಜರಪಾಟ ಅರಿವೆಯ ಮುಂಡಿಚಾಟಿಯ ಒಳಗಿಂದ ಎದ್ದು ಕಾಣುವ ಕೊರಳಲ್ಲಿ ಕಟ್ಟಿದ ಲಿಂಗದಕಾಯಿ, ಹಣೆಯಲ್ಲಿ ಮೂರು ಬೆರಳಿನ ಢಾಳ ವಿಭೂತಿಯ ಮುದುಕ, ನನ್ನನ್ನು ಬಾಗಿಲಲ್ಲೆ ಗಮನಿಸಿ ಗಂಡಗಚ್ಚಿ ಬಿಚ್ಚುತ್ತಾ ಕಸಬರಿಗೆ ಕೆಳಗಿಟ್ಟು ಎರಡೂ ಕೈ ಮೇಲೆತ್ತಿ ಜೋಡಿಸುತ್ತ 'ಸಲಾಂ ಅಲೆಕುಂ ಡಾಕ್ಟರ್ಸಾಬ ಆವೋ ಎಂದು ಕನ್ನಡ ಬರುತ್ತಿದ್ದರೂ ಗಟ್ಟಿಯಾಗಿ ಕರೆದ. ಆಗ ನನಗೆ ಆಶ್ಚರ್ಯದ ಮೆಲೆ ಆಶ್ಚರ್ಯ. ಮುಜುಗುರದ ಮೇಲೆ ಮುಜುಗುರ, ಅವರು ಹಾಸಿದ ಚಾಪೆಯ ಮೇಲೆ ಕುಳಿತು ನೀರು ಕುಡಿದು ಆ ಮೊದಲಿನ ಅನ್ನದ ಮುತ್ಯಾನ ವಿಚಾರ ಬಿಟ್ಟುಬಿಟ್ಟೆ, ಸದ್ಯ ಈ ಮುದುಕನ ವಿಚಾರ ನಡುವಳಿಕೆ ಆಚಾರಗಳ ಬಗ್ಗೆ ಅರಿಯಬೇಕೆನಿಸಿತು. ಎದುರಿಗಿದ್ದ ಮುದುಕ, ಎದುರಿಗಿರಲಾರದ ಮುತ್ಯಾ ಈ ಇಬ್ಬರು ನನ್ನ ಮನಸ್ಸಲ್ಲಿ ಯುರೇನಿಯಂ ಬಾಂಬ್ ಹಾಕಿದ ಅನುಭವವನ್ನುಂಟು ಮಾಡತೊಡಗಿದರು.


'ತಮ್ಮ ಹೆಸರ ಗೊತ್ತಾಗಲಿಲ್ಲ ಅಜ್ಜಾ' ಎಂದೆ


'ಅಬ್ದುಲ್ಸಾಬ ಅಂತ ಕರಿತಾರ ತಮ್ಮಾ'


'ಈಗ ನನ್ನ ಕರ್ಯಾಕ ಬಂದ ಹುಡುಗ ತಮಗೇನಾಗಬೇಕು'


'ಆಖರಿ, ಬೇಟಾ'


ಅಬ್ದುಲ್ಸಾಬ ತಂದಿ! ಶಿವಾನಂದ ಮಗಾ! ತಂದಿಗಿ ಮುಸ್ಲಿಂ ಧರ್ಮದ ಹೆಸರು, ಮಗನಿಗೆ ಹಿಂದೂ ಧರ್ಮದ್ದು. ಮನೆಯ ವಾತಾವರಣ ಹಿಂದುವೋ, 'ಮುಸ್ಲಿಮ್ವೋ' ಮುದುಕ ಗಡ್ಡ ಬಿಟ್ಟಿದ್ದಾನೆ, ಕೊರಳಲ್ಲಿ ಲಿಂಗ. ಹಣೆಯಲ್ಲಿ ವಿಭೂತಿ ಇದೆ. ಮಗ ಅಪ್ಪಟ ಹಿಂದೂ. ಏನಿದು ವಿಚಿತ್ರ! ಅನ್ನದ ಮುತ್ಯಾ! ಗಡ್ಡದ ಮುದುಕ!! ಏನಿದರ ರಹಸ್ಯ ಯಾವ ಮುದುಕನ ಬಗ್ಗೆ ಮೊದಲು ತಿಳಿಯಲಿ? ? ?... 'ಅದೆ ಎತ್ತ ಆರಾಮ ಇಲರ್ಾದ್ದು ಸಾಹೇಬ್ರ. ಚೆಕ್ಕ ಮಾಡಿ ನೋಡ್ರಿ ಏನಾಗೇದ' ಎಂದು ಹುಡುಗ ಹೇಳಿದ. 


ನಾನು ಗ್ವಾದಲಿಗೆ ಹೋಗಿ ಎತ್ತು ಪರೀಕ್ಷಿಸಿ ಅದಕ್ಕೆ ತಕ್ಕ ಉಪಚಾರ ಮಾಡಿ ಕೆಲವಂದಿಷ್ಟು ಔಷಧಿ ಗುಳಿಗೆ ಕೊಟ್ಟು 'ಇದಕ್ಕ ಬಾಳ ಜ್ವರಾ ಅದ. ಅದರ ಸಲುವಾಗಿ ನಾಲಿಗಿ ಸುಡತದ, ಉಸಿರಾಟಕ್ಕ ತೊಂದರಿ ಆಗಿ ಮೂಗಿನ ಹೊಳ್ಳಿ ಎತ್ತೆತ್ತಿ ಹಾಕತದ. ಈ ಇಂಜಕ್ಷನ್ಕ ಎಲ್ಲ್ಲಾ ಕಡಿಮಿ ಆಗತದ. ಎರಡ ದಿನಾ ಕಾಸಿ ಆರಿಸಿದ ನೀರ ಕುಡಸರಿ, ಮೇವು ತಿನದಿದ್ರ ಸ್ವಲ್ಪ ಹುರಳಿ ಹಿಟ್ಟಿನ ಗಂಜಿ ಮಾಡಿ ಸಾವಕಾಶ ಗೊಟ್ಟಾಮಾಡಿ ಹಾಕ್ರಿ, ಅಂದ್ರ ಹೊಟ್ಟಿಗಿ ಆದಾರ ಆಕ್ಕದ. ಸ್ವಲ್ಪಸ್ವಲ್ಪ ಮೇವು ತಿಂದ್ರ ಗಂಜಿಯನ ಹಾಕುದುಬ್ಯಾಡ ಇದಕ ನಿಮ್ಮ ಗಾಂವಟಿ ಮಾತಿನ್ಯಾಗ ಕಾಲಗುಂದ ಆಗೇದ ಅಂತಾರ ಅಂದ್ರ ಎತ್ತಿನ ಕಾಲ ಬ್ಯಾನಿ ಆಗಿ ಒಂದೊಂದು ಕಾಲ ಅದು ಎತ್ತಿ ಹಿಡಿತದ ಎಂದು ಅವರಿಗೆ ತಿಳಿಸಿ ಹೇಳಿದೆ. 


'ನಿಮ್ಮ ಕೈಗುಣಾ ನೋಡ್ರಿ ಡಾಕ್ಟರ್ಸಾಹೇಬ್ರಾ ದೌಡ ಆರಾಮ ಆಗ್ಲಿ, ನಾನೂ ಅದನ್ನ ಬೇಡಕೊಂಡಿನಿ ಆರಾಮ ಆದ್ರ ಶಿವಾನಂದ ಅನ್ನದ ಮುತ್ಯಾಗ ಕಾಯಿ ಒಡಿತಿನಿ ಅಂತ ಹರಕಿ ಹೊತ್ತಿನಿ' ಎಂದು ಅಜ್ಜ ಅಬ್ದುಲ್ಸಾಬ ಹೇಳಿದ. 


ನನಗೆ ಪುನಃ ಆ ಸತ್ತ ಮುತ್ತ್ಯಾನ ವಿಚಾರ ತಿಳಿದುಕೊಳ್ಳಬೇಕು ಎನಿಸಿತು. ಅನ್ನದ ಮುತ್ಯಾನ ವಿಚಾರ ತಿಳಿಯಲು ಆತುರನಾಗಿ, ಆಯ್ತು ಅಜ್ಜಾವರೆ ಎತ್ತಿಗಿ ಆರಾಮ ಆಗ್ತದ. ಆ ವಿಚಾರ ಬಿಡ್ರಿ. ನಾನು ಈಗ ಬಾಗೇವಾಡಿಯಿಂದ ಪಟಪಟ್ಯಾಗ ಬರಬೇಕಾದ್ರ ನಿಮ್ಮ ಊರ ಘಡಚ್ ಅದ ಅನ್ನಾನಾ, ನಿಮ್ಮ ಮಗಾ ಶಿವಾನಂದ ಅಂದಾ. ಅನ್ನದ ಮುತ್ಯಾನ ಆಶೀವರ್ಾದ ಅಂತ ಯಾರು ಆ ಮುತ್ಯಾ? ಅವರು ಏನಿದ್ರು! ಮತ ನೀ ತಪ್ಪ ತಿಳಕೊಳಾಂಗಿಲ್ಲ ಅಂದ್ರ ನಿನಗೂ ಒಂದು ಪ್ರಶ್ನೆ ಕೇಳತಿನಿ ನಿನ್ನ ಹೆಸರಾ ಅಬ್ದುಲ್ಸಾಬ ನಿನ್ನ ಮಗನ ಹೆಸರಾ ಶಿವಾನಂದ ಹ್ಯಾಂಗಿದು?


'ಅದರ ಹಕ್ಕಿಕತ್ ಮನಗಂಡ ಐತ್ರಿ ತಮ್ಮಾ, ಅಂದ್ಹಂಗ ನಿಮ್ದು ಯಾವೂರು?' ಎಂದು ಕೇಳಿದರು.


'ನೌಕರಿ ಮಾಡವರ್ಗಿ ಅವರು ಇದ್ದದ್ದ ತಮ್ಮೂರ. ಈಗ ಸದ್ಯ ಬಸವನಬಾಗೇವಾಡಿ ನಮ್ಮೂರ ಅಂತ ತಿಳಿಯಲಾ' ಅಂದ್ಯಾ. 


ನೋಡ್ರಿ ತಮ್ಮಾ ಶಿವಾನಂದ ಮುತ್ಯೋರ ಆ ಸತ್ಯುಳ್ಳ ಕಥಿ ಬಾಳ ಅರ್ಭಟ ಅದ. ಅವರು ಹಿಂದಿನ ಕಾಲದ ಯಾವ ಸಾಧು-ಸತ್ಪುರುಷರಿಗಿಂತ, ಯಾವ ದೇಶಾಭಿಮಾನಿಗಿಂತ ಕಡಿಮಿ ಇಲ್ಲ. ತಲಿಗಿ ರುಮಾಲಾ, ಅಗಲ ಮುಖಾ, ಹಣ್ಯಾಗ ಈಬತ್ತಿ, ಕೊಳ್ಳಾಗ ಲಿಂಗ, ಕೈಯಾಗ ಒಂದು ಬೆತ್ತ ಹಿಡಕೊಂಡು ತೆಲಿ ತೆಗ್ಗಿಸಿ ಊರಾಗ ಹೊಂಟ್ರ ಜನಾ ದೂರದಿಂದ ಭಕ್ತಿಭಾವದಿಂದ ಕುಂತಲ್ಲೆ ಎದ್ದುನಿಂತು ನಮಸ್ಕಾರ ಮಾಡತಿದ್ರು. ಜೇವಗರ್ಿ ತಾಲೂಕಿನ ಸೊನ್ನದಾಗ ಅವ್ರುದು ದೊಡ್ಡಮಠಾ. ಅವರು ಜಾತಿಯಿಂದ ಜಂಗಮರಲ್ಲದ್ದಕ್ಕ ಆ ಮಠದ ಅಧಿಕಾರ ಅಲ್ಲಿ ಜನಾ ಕೊಟ್ಟಿರಲಿಲ್ಲ. ಅದರ ಶಾಖಾಮಠ ಈ ಮಸಬಿನಾಳ. ಈ ಹಿಂದ ನೂರು ವರ್ಷದ ಆಸಪಾಸ್ ಇರಬೇಕಪಾ, ಅದಕ ಏನ ಅಂತಾರಲಾ.... 'ಹತ್ತೊಂಬತ್ತನೆ ಶತಮಾನದ ಪ್ರಾರಂಭದಲ್ಲಿ'. 


ಹಾಂ...! ಹಾಂ...! ಹೆಚ್ಚು ಕಡಿಮಿ ಆ ವರ್ಷದಾಗ ಅನ್ನು. ನಮ್ಮೂರ ಮಠಕ್ಕ ಸ್ವಾಮಿಗೊಳು ಅಂತ ಊರಾನವರು ಪಟ್ಟಕ್ಕ ಕಟ್ಟೂ ಕಾರ್ಯಕ್ರಮ ಮಾಡಾಕತ್ರೂ. ಇವರು ಜಾತಿಯಿಂದ ಸ್ವಾಮಿಗೊಳು ಅಲ್ಲದೆ ಇದ್ರೂ ನಮ್ಮ ಊರಿನವರು ಅವರ ಗುಣಕ್ಕ ಮೆಚ್ಚಿದ್ರು. ಸ್ವಾಮಿಗೊಳಗಿ ಕೊಡುಕ್ಕಿಂತ ಹೆಚ್ಚಿನ ಮರ್ಯಾದಿ ಅವರಿಗಿ ಕೊಡತಿದ್ರು. ಪಟ್ಟಕ್ಕ ಕಟ್ಟು ಮೆರವಣಿಗಿ ಮ್ಯಾಳದ ಹಿರೇತಾನ ಗಾಂಧೀ ಅವರು ವಹಿಸಿದ್ರು... 


'ಏ...! ಏನಜ್ಜ ಏನ ಹೇಳಾಕತ್ತಿ ನಿಮ್ಮ ಈ ಮಸಿಬಿನಾಳಕ ಗಾಂಧಿಜೀ ಅವರು ಬಂದಿದ್ದರಾ? ಅವಾಗ ಅವರು ಇಂಗ್ಲಂಡನ್ಯಾಗ.....' ಎಂದು ನಾನು ಮಧ್ಯದಲ್ಲಿ ಮಾತಾಡಿದೆ.


'ಪೂರಾ ಕೇಳ್ರಿ, ತಮ್ಮಾ! ಜರಾ ಲಕ್ಷಕೊಟ್ಟು. ಆ ಗಾಂಧಿ ಅಲ್ಲ, ನಮ್ಮ ಗಾಂಧಿ, ನಾವು ಮರತ್ ಗಾಂಧಿ, ಕನರ್ಾಟಕ ಗಾಂಧಿ ಹಡರ್ೆಕರ ಮಂಜಪ್ಪನವರು.'


ಹಾಂ! ಹಾಂ! ಅವರಾ... ಅವ್ರು ಬಾಳ ದೊಡ್ಡ ವ್ಯಕ್ತಿ. ಹೇಳ್ರಿ ಹೇಳ್ರಿ ಎಂದು ನನ್ನ ಪೆದ್ದುತನವನ್ನು ಮರೆಮಾಚಿಕೊಳ್ಳುತ್ತ ಅಜ್ಜನ ಮಾತಿನ ಕಡೆ ಲಕ್ಷ್ಯ ಕೊಟ್ಟೆ. 


'ಮಂಜಪ್ಪನವರ ಹಿರೇತನದಾಗ ಈ ಮಸಬಿನಾಳದಾಗ ಇಂಗ್ರೇಜಿ ಮಂದಿ ಹಾಕ್ಕೊಳ್ಳು ಅರಿಬಿ, ತಂಬಾಕ ಡೆಬ್ಬಿ, ತಂಬಾಕ ಸೇದು ಚಿಲಮಿ ಎಲ್ಲಾ ಒಂದಗೂಡಿಸಿ ಸುಟ್ರು. ಸಿಂದೀಗಿಡ ಕಡಿದ್ಕ ಪಣ ತೊಟ್ಟರು. ಪಟ್ಟಕ್ಕೇರಿದ ಮುತ್ಯಾ ಏನ ಅಲ್ಗಜರ್ಿ ಇರಲಿಲ್ಲ. ನಮ್ಮೂರ ಹುಡುಗುರ್ಗಿ ಒಂದು ರಾತ್ರಿ ಮಠದಾಗ ಕುಡ್ರಸಿಗೊಂಡು ದೇಶಾಭಿಮಾನದ ಮಾತ ಹೇಳತಿದ್ರು. ಅವರ್ಗಿ ಸಾಲಗೆ ಊಟಕ್ಕ ಕುಂದ್ರಿಸಿ ರೊಟ್ಟಿ ಒಣಗಿ ನೀಡಿ ಎಲ್ಲಾರ ರೊಟ್ಯಾಗ ಭಗಭಗಸಿ ಕುಸಬಿ ಹಾಕಿದ್ರು. ನೀವು ಡೋಣಿಸಾಲಿನ ಯುವಕರು ವಿಜಯನಗರ ಅರಸರ ವಂಶಸ್ತರು ಕಿತ್ತೂರ ಚೆನ್ನಮ್ಮನ ಗತ್ತುಳ್ಳವರು ಬಸವನಾಡಿನ್ಯಾಗ ಹುಟ್ಟಿದವರು ಹಿಂದುಸ್ಥಾನದ ನೇತಾರರಾಗಬೇಕು. ಈ ಕುಸಬಿ ನಿಮ್ನಿಮ್ಮ ಎರಡೂ ಕೈಲೆ ಹಿಂಡಿ ಹಿಪ್ಪಿಮಾಡಿ ರೊಟ್ಯಾಗ ಎಣ್ಣಿ ಬಸಗೊಂಡು ಉಣಬೇಕು. ಹಿಂಗುಂಡು ಹಿಂದುಸ್ಥಾನದ ಸ್ವಾತಂತ್ರ್ಯದ ಆಂದೋಲನ ಎಲ್ಲಾಕಡೆ ಹಬ್ಬಸಬೇಕು. ನಿಮ್ಮ ಶಕ್ತಿ ಅಂದ್ರ ಹಾಲು ಕುಡುದು ಚೀಲಾ ಒಗಿಬೇಕು, ನೆಲಾ ಗುದ್ದಿ ನೀರ ತಗಿಬೇಕು. ಕಜೂರಿ ತಿಂದು ಕಲ್ಲ ಒಡಿಬೇಕು. ಹಾಂಗ ಇವತ್ತಿನಿಂದ ನೀವು ಸ್ವಾತಂತ್ರ್ಯ ಸೇನಾನಿಗಳಾಗಬೇಕು. ವಂದೇ ಮಾತರಂ ಹಾಡಾ ಹೇಳಬೇಕು. ಅಂಥ ತರುಣರ್ಗಿ ತಲಿ ತುಂಬಿದರು. ಈ ಸುದ್ದಿ ಊರಾಗ ಹಬ್ಬತು. ಅಷ್ಟೆ ಅಲ್ಲ ಹತ್ತ ಹಳ್ಳಿಗೂ ಹೋತು. ಜಿಲ್ಲಾದಾಗ ಹಬ್ಬಿ ಬಾಳಷ್ಟು ಸೇನಾನಿಗಳು ಇವರ ಆಶ್ರಯ ಪಡದರು. ವೇಶಾ ಮರಸಗೊಂಡು ಇರಾಕ ಬಂದ್ರು ಹಾಂಗ ಬಂದವಗರ್ಿ ಮಠದಿಂದ ಊಟಾ ಬಟ್ಟಿ ಕಳಿಸಿದ್ರು, ದೇಶಕ್ಕ ಸ್ವಾತಂತ್ರ ಹ್ಯಾಂಗ್ ತಗೊಬೇಕು. ಅನ್ನು ಟ್ರೇನಿಂಗ್ ಕೊಟ್ಟರು ಇಂಗ್ರೇಜಿ ಪೊಲೀಸರು ಸೇನಾನಿಗಗಳನ್ನು ಹುಡಕ್ಯಾಡಾಕ ಬಂದಾಗ ನಬಿಸಾಬನ ನೀಲಪ್ಪನ ಮಾಡಿ ನೀಲಪ್ಪನ ಗಪಾರಸಾಬನ್ನ ಮಾಡಿ ತಮ್ಮ ಬ್ಯಾರೆ ಬ್ಯಾರೆ ಮಠದಾಗ ಮುಚ್ಚಿಟ್ಟು ಆಶ್ರಯ ಕೊಟ್ಟರು. ಪೊಲೀಸಿನವರು ಈ ಮುತ್ಯಾನ ಇಜಾಪುರ ಕಚೇರಿಗಿ ಕರಿಸಿ ಇಚಾರ ಮಾಡಿದ್ರ ದೇಶಾಭಿಮಾನದ ಈ ಸನ್ಯಾಸಿ ಕೆಂಪಮುಸಡಿ ಸಾಬಗ ಅಂದ್ರಂಥ ನಾನು ಸನ್ಯಾಸಿ ನನ್ನ ಮಠ ಅನ್ನದ ಮಠ. ಇದ್ದ ಭಕ್ತ ಮಠಕ್ಕ ಕೊಡ್ತಾನ ಇಲ್ಲದ ಭಕ್ತ ಬಂದು ಉಂಡುಹೋಗ್ತಾನ ಹಾಂಗ ದಿನಾ ಹತ್ತಾರು ಮಂದಿ ಬರ್ತಾರಾ ಹೋಗ್ತಾರಾ ಇದಕ್ಕಿಂತ ಹೆಚ್ಚಿಗಿ ನನಗೇನು ಗೊತ್ತಿಲ್ಲ'


ಇಷ್ಟೆ ಅಲ್ಲ ತಮ್ಮಾ ಡಾಕ್ಟರಸಾಬ, ಒಂದು ಸಲಾ ಬರಗಾಲ ಬಿದ್ದು ಜನಾ ಅನ್ನಕ್ಕ ಹಾಹಾಕಾರ ಮಾಡಾಕತ್ರು. ಸಕರ್ಾರದವರು ಕೊಟ್ಟ ಕೊಳವಿ ಡೊಲಿಸಜ್ಜಿ ಯಾರಿಗೂ ಸಾಲ್ತಿದ್ದಿಲ್ಲ. ಮಂದಿ ಅನ್ನ ಇಲ್ಲದ ಸಾಯಾಕತ್ತರು. ಆವಾಗ ನಮ್ಮ ಭಾಗದಾಗ ಮಠದಿಂದ ಗಂಜಿಕೇಂದ್ರ ತಗದು ಜನರನ್ನ ಬದಿಕಿಸಿದ್ರು. ಎರಡು ಮೂರು ತಿಂಗಳ ಹಿಂಗೆ ಗಂಜಿ ಕೇಂದ್ರ ನಡದು ಮಠದ ಹೊಲ ಮಠದಾನ ಬಂಗಾರ ಮಾರಿದ್ರು ತಾವೂ ದಿನಕ್ಕ ಒಂದೇ ರೊಟ್ಟಿ ಉಣುದಂತ ಪ್ರತಿಜ್ಞಾ ಮಾಡಿಕೊಂಡರು. ಇವರು ಯಾವ ಯಾವ ಭಾಗದಾಗ ಗಂಜಿಕೇಂದ್ರ ತಗದ್ರು ಎಲ್ಲೆಲ್ಲಾ ಇಂಗ್ರೇಜಿ ಸರಕಾರಕ್ಕ ಹಗರಾತು ನಾಡಿಗೆಲ್ಲಾ ಅನ್ನಾ ಹಾಕಿದ್ದಕ್ಕ ಅವಾಗ ಇವರಿಗಿ ಆ ಸಕರ್ಾರದ ಜಿಲ್ಲಾ ಸಾಹೇಬ ಹಂಡರಸನ್ ಅನ್ನದ ಮುತ್ಯಾ ಅಂತ ಮೆಡಲ್ ಕೊಟ್ಟು ಗೌರವಿಸಿದ. ಆವಾಗಿನಿಂದ ಈ ನಮ್ಮ ಶಿವಾನಂದ ಸ್ವಾಮಿಗೊಳಿಗಿ 'ಅನ್ನದ ಮುತ್ಯಾ' 'ಅನ್ನದ ಅಪ್ಪ' 'ಅನ್ನದ ಸ್ವಾಮಿ' ಅಂಥ ನಾಡಾನೆ ಕರ್ಯಾಕತ್ತು. ಇಂಥವರ ಗರಡಿಯೊಳಗ ನಮ್ಮಪ್ಪ ಹಸನಸಾಬ ಬೆಳದುಬಂದ. ನಾವು ಜಾತಿಯಿಂದ ಮುಸಲ್ಮಾನರಾದರೂ ನಮ್ಮ ಆಚಾರ ವಿಚಾರ ಶಿವಾನಂದ ಮುತ್ಯಾ ಅವರದು. ನಾವು ಅಷ್ಟೆ ಅಲ್ಲಾ ಇಡೀ ಈ ಭಾಗದಾನ ಮಂದಿನ ಅವರ್ನ ಎದ್ಯಾಗಿಟ್ಟು ಪೂಜಾ ಮಾಡ್ತಾರ. ಮಸಬಿನಾಳದಾಗ ಅವರು ಮಾಡಿದ ಸೇವಾ ನೋಡಿ ನಾಡಿನ ಭಾಳ ಜನಾ ದೊಡ್ಡದೊಡ್ಡ ಸ್ವಾಮಿಗೋಳು ಇವರ ಗೆಳೆತನಾ ಮಾಡಿದ್ರು. ಇವರು ತಮ್ಮ ಮಠದಿಂದ ಊರಾಗ ರಸ್ತಾ ಮಾಡಿಸಿದ್ರು. ದನಗೊಳು ನೀರ ಕುಡ್ಯಾಕ ಹ್ಯಾಳ ಕಟ್ಟಿಸಿದ್ರು. ಒಗ್ಯಾಣ ಮಾಡುದಕ ದೊಡ್ಡ ದೋಭಿಗಾಟ ತಯಾರಾತು. ಎಲ್ಲಾಕ್ಕೂ ಹೆಚ್ಚು ಊರಾಗ ಒಂದು ಸಾಲಿ ಕಟ್ಟಿಸಿದ್ರು. ಮಠದಾಗ ಪುರಾಣ ನಡದ್ರ ನೀವು ದೇಶಾಭಿಮಾನಿಗಳಾಗ್ರಿ, ಮೊದಲ ಮಕ್ಕಳ್ನ ಸಾಲಿಗಿ ಕಳಸ್ರಿ... ಅಂಥ ಬೋಧನಾ ಮಾಡತಿದ್ರು. ಏನೂ ತಿಳಿಲಾರದ ಕಗ್ಗಜನಾ ಮುತ್ಯಾ ಅವರ ಬೆಳಕನ್ಯಾಗ ಬೆಳದು ದೊಡ್ಡ ದೊಡ್ಡ ಸಾಹೇಬ್ರ ಆದ್ರು, ಸುಭೇದಾರ ಆದ್ರು. ರಾಜಕೀಯ ನಾಯಕರಾದ್ರು. ಈ ನಾಡಿನ ಯಾವ ಊರಾಗ ಇರಲಾರದಷ್ಟು ಸ್ವಾತಂತ್ರ್ಯ ಸೇನಾನಿಗಳು ನಮ್ಮೂರ ಮಸಿಬಿನಾಳದಾಗ ಅದಾರ. ಅದಕ್ಕೆಲ್ಲಾ ಇವರೇ ಕಾರಣ. ಎಂದು ಅಜ್ಜ ಸ್ವಲ್ಪ ಮಾತು ಕಡಿಮೆ ಮಾಡಿದ. ಅಷ್ಟರಲ್ಲಿ ನಾನು


ಅಲ್ಲಾ!!.. ಅಬ್ದುಲ್ಸಾಬ ಅಜ್ಜಾ ಅವರೆ ನೀವು ಮುಸ್ಲಿಂಮರಾಗಿಯೂ ಕೊಳ್ಳ್ಳಾಗ ಲಿಂಗಾ ಕಟಗೊಂಡಿರಲಾ? 


ಶಿವಾನಂದ ಅಪ್ಪಾ ಅವರ ಸಂಪರ್ಕದಾಗ ನನಗ ಈ ಆಚಾರ ವಿಚಾರ ಹಿಡಸ್ತು. ಸ್ನಾನ ಮಾಡಿ ಲಿಂಗಾ ಅಂಗಯ್ಯಾಗ ಇಟಗೊಂಡು ಮೌನಾಗಿ ಆ ಲಿಂಗಾ ಕೇಂದ್ರಿಕರಿಸಿ ಧ್ಯಾನ ಮಾಡಿದ್ರ ದಿನಾಲು ನಾ ಹೊಸಾ ಮನಸ್ಯಾ ಆಕ್ಕಿನಿ. ಒಳ್ಳೆ ಕಾಯಕ ಮಾಡ್ತಿನಿ. ಸತ್ಯದಿಂದ ಹಣಗಳಸತಿನಿ. ಸಮಾಜದಾಗ ನನಗ ಗೌರವ ಅದ. ಹೊಡಿ ಕಡಿ ಬಡಿ ಹಿಂಸೆ ಮಾಡವರು ಅಂದ್ರ ನನಗೆ ಆಗಿ ಬರಾಂಗಿಲ್ಲ. ನಮ್ಮ ಬದುಕಿಗೆ ದಾರಿ ತೋರಿಸಿದ ಶಿವಾನಂದ ಮುತ್ಯಾನ ನಾವು ಎಷ್ಟ ನೆನಸಿದರೂ ಕಡಿಮಿನ. ಅದಕ್ಕ ನನ್ನ ಕಡಿಹುಟ್ಟ ಮಗನಿಗಿ  'ಶಿವಾನಂದ' ಅಂತ ಅವರ ಹೆಸರಿಟ್ಟಿನಿ. ಈ ಭೂಮಿಮ್ಯಾಗ ಒಂದುನೂರಾ ಹದಿನಾಲ್ಕು ವರುಷ ಬಾಳಿದ ಶಿವಾನಂದ ಮುತ್ಯಾ ಸೊನ್ನ, ಜೇವಗರ್ಿ, ಜಾಲವಾದಿ, ನೆಲೋಗಿ, ಆಂಧ್ರದಾಗಿರೊ ಎಲ್ಲಾನೂರ ಎಲ್ಲಾಕಡೆ ಎಲ್ಲಾ ಜಾತಿಯ ಭಕ್ತರಿಗೂ ಉದ್ದಾರ ಮಾಡ್ಯಾರ. ಸಾಲಿ ಕಲಿರಿ ಕಾಯಕಾ ಮಾಡರಿ ದೇಶಕ್ಕ ದುಡಿರಿ ಮನಸ್ಯಾರಾಗಿ ಬದಕರಿ ಅಂಥ ಅವರು ಬಂದವರಿಗೆಲ್ಲ ಹೇಳತ್ತಿದ್ದರು. ಲಿಂಗೈಕ್ಯ ಆಗಾಗೂ ಅಲ್ಲಿ ನೆರೆದ ಭಕ್ತರಿಗೆ ಹೇಳ್ಯಾರ. 


ಅವರು ಲಿಂಗೈಕ್ಯ ಆಗಿದ್ದು ಯಾವಾಗ ನಿನಗ ಗೊತ್ತದನು?


ನಿಗದಿ ದಿನಾ ಗೊತ್ತಿಲ್ಲ ಒಂದಿಪ್ಪತ್ತು ವಷರ್ಾತು 


ವೀರಶೈವ ಮಠಾಧಿಪತಿಯೊಬ್ಬನ ಅಪ್ಪಟ ದೇಶಾಭಿಮಾನದ ಇನ್ನೊಂದು ಮುಖವನ್ನು ಅಬ್ದುಲ್ ಅಜ್ಜನಿಂದ ತಿಳಿದ ನಾನು ಅವರ ಮನೆ ಬಿಟ್ಟು ಬರುವಾಗ ಆ ಮಾಹಾನ್ ವ್ಯಕ್ತಿಯ ಪುಣ್ಯಮೂತರ್ಿ ಇರುವ ಗ್ರಾಮದ ಶಿವಾನಂದೇಶ್ವರ ವಿರಕ್ತಮಠಕ್ಕೆ ಹೋಗಿ ನಮಿಸಿ ಕೆಲ ನಿಮಿಷ ಮೌನವಾಗಿ ಕುಳಿತುಕೊಂಡೆ. ರಾಷ್ಟ್ರಕ್ಕೆ ಅವರು ಮಾಡಿದ ತ್ಯಾಗ, ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಅವರು ತೋರಿಸಿದ ದಾರಿ, ದೀನದಲಿತರಿಗಾಗಿ ಅವರು ತಳೆದಿದ್ದ ನಿಲುವು, ಗ್ರಾಮ ಸುಧಾರಣೆಯ ಅವರ ಕನಸು, ಮಹಿಳೆಯರ ಸಮಸ್ಯೆ, ದೋಬಿಗಾಟಿನ ವಿಚಾರ, ಮುಂತಾದ ಅವರ ಜೀವನಾದರ್ಶಗಳನ್ನು ಮೆಲುಕು ಹಾಕುತ್ತ ಬಾಗೇವಾಡಿಗೆ ಬಂದೆ.


ಶಂಕರ ಬೈಚಬಾಳ


'ವಚನ' ರಾಜಾಜಿ ನಗರ


ವಿಜಯಪುರ - 586109


ಮೊ: 9448751980

Wednesday, 9 March 2022

ಶಂಕರ ಬೈಚಬಾಳ

 * ಶಂಕರ ಬೈಚಬಾಳ

* ಹಿರಿಯ ಪಶುವೈದ್ಯ ಪರೀಕ್ಷಕರು

* ಜನನ ೨೨-೭-೧೯೬೬,

   ಮಸಬಿನಾಳ, ವಿಜಯಪುರ ಜಿಲ್ಲೆ

* ಹವ್ಯಾಸ-ಬರವಣಿಗೆ,ನಟನೆ,ಜನಪದ 

  ಹಾಡುವುದು, ಉಪನ್ಯಾಸ ಮುಂತಾದ.

* ಕೃತಿಗಳು- "ಶಿವಾನಂದ ಶಿವಯೋಗಿಗಳು" "ವಚನ ಮಾಂಲ್ಯ"  ಅದೇನ ಕಾಗದಂತಲ್ಲಿ" "ರೂಪಿಲ್ಲದವರ ರೂಪಿಸಿ" "ಜಾನಪದ ಚಿಂತನ " "ಬುದ್ದ ಸಿಕ್ಕಿದ್ದ" "ಸಿಂಹಾಸನ ಮಾಮಲೇದಾರ"

"ನಿರ್ನೆರ" "ತರ್ದವಾಡಿ ಜಾನಪದ" "ಪಡಗಾನೂರ ಶಂಕರಗೌಡ" "ಬಸರಿಗಿಡದ ವೀರಪ್ಪ " "ಮಸಬಿನಾಳದ ಪಶುವಾದಿಗಳು" "ಕೆಂಪು ಹುಡಗಿ ಕಪ್ಪು ಕಾಲ್ಮರಿ" "ಹಲಸಂಗಿ ಬಾಗದ ಲಾವಣಿಕಾರರು " "ಒಡ್ದ ಹೇಳು ಹೌದೌದಂತಿನಿ" "ಹೊನ್ನ ಉಟ್ಟಿಗೆ"

"ರಾಜಗುರು" "ಸೈತಾನ" " ಮುಜಾಹಿದ್ದಿನ್" "ಹಂತಿ" " ಮಸಬಿನಾಳ ದ ಸಾಂಸ್ಕೃತಿಕ ಅಧ್ಯಯನ " "ನಿರ್ನೆರ" "ಆನು-ತಾನು"   "ಬಿ.ಎಸ್. ಪಾಟೀಲ (ಸಾಸನೂರ) " "ತೋಂಟದ ಸಿದ್ಧಲಿಂಗ ಶ್ರೀಗಳು " "ಗುರುಸಿದ್ದಪ್ಪ ಶರಣರು" ಮು

*  "ಮೌನ ಕ್ರಾಂತಿ" ದಾರಾವಾಯಿ ಸಹ ನಿದರ್ಶನ, ಸಾಕ್ಷಿಚಿತ್ರಗಳ ನಿರ್ಮಾಣದಲ್ಲಿ

ಸಹಕಾರ ಮು 

* ತಮಿಳುನಾಡಿನ  ಭಾರತೀಯಾರ,ಆಂದ್ರಪ್ರದೇಶದ ಕುಂಪಂ,ಕರ್ನಾಟಕದ ಹಲವು  ವಿ .ವಿ .ಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಉಪನ್ಯಾಸ, ಹೀಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ನೂರಾರು ಉಪನ್ಯಾಸ ನೀಡಿದ್ದಾಗಿದೆ.

 * ಪದಾಧಿಕಾರಿ- ಸಾಹಿತ್ಯ ಪರಿಷತ್ತು, ಲೇಖಕರ ವೇದಿಕೆ,ಪುಸ್ತಕ ಪರಿಷತ್ತು, ಪುಸ್ತಕ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಸಂಘ,ಹಲವು ಪ್ರತಿಷ್ಠಾನ,

ಬಸವ ಸಮಿತಿ ಅಧ್ಯಕ್ಷ ,ಸದಸ್ಯರಾಗಿ ಸೇವೆ ನಿರಂತರ.

* ಪ್ರಶಸ್ತಿ- ಗೊರೂರು ರಾಮಸ್ವಾಮಿ ಅಯ್ಯಂಗಾರಕನ್ನಡ,ಕ್ರಮಣ ಕಥಾ ಸಾಹಿತ್ಯ,ಮುಂಬಯಿ ಕನ್ನಡ ಕಥಾ ಪ್ರಶಸ್ತಿ, ಕುವೆಂಪು ಶ್ರೀ,ರಾಜಗುರು ಪ್ರತಿಷ್ಠಾನ, ಯುವ ಲೇಖಕರು ಪ್ರಶಸ್ತಿ, 

ದೆಹಲಿ ಕನ್ನಡ ಸಂಘ,ರಾಮನೊಹರ ಲೋಹಿಯಾ,ವಿಜಯವಾಣಿ ಕಥಾ ಸ್ಪರ್ಧೆ,ಪುಣೆಯ ಅಮೂಲ್ಯ ಕಥಾ ಪ್ರಶಸ್ತಿ, ಮುಂತಾದವು.

* ವಿಳಾಸ-ಶಂಕರ ಬೈಚಬಾಳ

                 "ವಚನ"

ರಾಜಾಜಿ ನಗರ,ವಿಜಯಪುರ-೫೮೬೧೦೯

ಪೊ-೯೪೪೮೭೫೧೯೮೦

ಮಿಂಚಂಚೆ-shankarb66@gmail.com